ಬಿಜಾಪುರ ಜಿಲ್ಲೆಯ ಬಾಗೆವಾಡಿ ತಾಲ್ಲೂಕಿನಲ್ಲಿ ಬಾಗೆವಾಡಿಗೆ 10 ಕಿಮೀ ದೂರದಲ್ಲಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಉಪರಾಜಧಾನಿಯಾಗಿತ್ತು. ಕಳಚೂರ್ಯ ಬಿಜ್ಜಳನ ಜನ್ಮಸ್ಥಳವೆಂದು ಚರಿತ್ರೆಕಾರರು ಹೇಳುತ್ತಾರೆ. ಶೈವ, ವೈಷ್ಣವ, ವೀರಶೈವ ಮತಸ್ಥರ ದೇವಾಲಯಗಳಿವೆ. 11ನೆಯ ಶತಮಾನದ ಕನ್ನಡ ಕವಿ ಅಗ್ಗಳನ ಜನ್ಮಸ್ಥಳವೆಂದೂ ತನ್ನ ಚಂದ್ರಪ್ರಭ ಪುರಾಣವನ್ನು ಆತ ಇಲ್ಲಿಯೇ ಬರೆದನೆಂದೂ ಹೇಳುತ್ತಾರೆ. ಪೂರ್ವದಲ್ಲಿ ಚಂದ್ರಪ್ರಭ ಬಸದಿ ಪ್ರಖ್ಯಾತವಾಗಿತ್ತು; ಈಗ ಅದರ ಕುರುಹಿಲ್ಲ. ಅಲ್ಲಿಯ ವಿಗ್ರಹ ರೇವಣಸಿದ್ಧೇಶ್ವರ ಗವಿಯಲ್ಲಿ ರಕ್ಷಿಸಲ್ಪಟ್ಟಿದೆ. ವೀರಶೈವ ಆಚಾರ್ಯಪುರುಷರಲ್ಲಿ ಒಬ್ಬನಾದ ರೇವಣಸಿದ್ಧನೆಂದು ಹೇಳಲಾದ ಈ ಗವಿಯಲ್ಲಿ ಆ ಮಹಾತ್ಮನ ವಿಗ್ರಹವಿದೆ. ಮತ್ತೊಂದು ಭಾಗದಲ್ಲಿ ಚನ್ನಬಸವಣ್ಣನ ತಾಯಿ ಎನ್ನಲಾದ ಅಕ್ಕನಾಗಮ್ಮನ ಗವಿಯಿದೆ. ಹಿಂದೆ ಇಂಗಳೇಶ್ವರ ದೊಡ್ಡ ನಗರವಾಗಿದ್ದಂತೆ ಕಾಣಬರುತ್ತದೆ. ಇದರ ಶಾಖಾನಗರವೇ ಬಾಗೆವಾಡಿ. ಸಂಸ್ಕೃತ ಬಸವಪುರಾಣಗಳಲ್ಲಿ ಇಂಗಳೇಶ್ವರ ಬಾಗೆವಾಡಿ ಎಂದು ಹೇಳಲಾಗಿದೆ. ಇಲ್ಲಿ ಶಿಲಾಶಾಸನಗಳು, ನಿಸದಿಕಲ್ಲುಗಳು, ಮಹಾಶಾಸನಗಳು ವಿಪುಲವಾಗಿ ಇವೆ.

ಇಂಗಳೇಶ್ವರದಲ್ಲಿ ಎರಡು ಗವಿ ದೇವಾಲಯಗಳನ್ನೊಳಗೊಂಡಂತೆ ಎಂಟು ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಮೂರನ್ನು 1128ರಲ್ಲಿ ನೀಲಕಂಠನಾಯಕ ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಸೋಮೇಶ್ವರ ದೇವಾಲಯ 38 ದುಂಡುಗಂಬಗಳಿಂದ ಕೂಡಿದ ದೊಡ್ಡ ದೇವಸ್ಥಾನ. ಮುಖಮಂಟಪದ ಮೇಲ್ಛಾವಣಿಗೆ ಹೊದ್ದಿಸಿರುವ ಅಷ್ಟಕೋಣಾಕೃತಿಯ ಶಿಲೆ ನವಗ್ರಹಗಳನ್ನು ಪ್ರತಿಬಿಂಬಿಸುತ್ತದೆ. ಗರ್ಭಗೃಹದ ಬಾಗಿಲಲ್ಲಿ ಎರಡು ಸ್ತ್ರೀವಿಗ್ರಹಗಳಿವೆ. ಅದರ ಎರಡು ಪಕ್ಕಗಳಲ್ಲಿ ಗರ್ಭಗುಡಿಯಿದ್ದು ಗಣಪತಿ ಮತ್ತು ಈಶ್ವರ ವಿಗ್ರಹಗಳಿವೆ. ಇನ್ನೊಂದು ವೈಷ್ಣವ ದೇವಾಲಯ. 24 ದುಂಡುಗಂಬಗಳಿಂದ ಕೂಡಿದ ಆ ದೇವಾಲಯದಲ್ಲಿ ನಾಲ್ಕು ಅಡಿ ಎತ್ತರದ ಮುದ್ದಾದ ನಾರಾಯಣ ವಿಗ್ರಹವಿದೆ. ಇದು ಪೇಶ್ವೆಯರ ಕಾಲದಲ್ಲಿ ಪ್ರತಿಷ್ಠಾಪಿತವಾಗಿರಬೇಕೆಂದು ತಿಳಿದುಬರುತ್ತದೆ. 

ನಾರಾಯಣ ದೇವಸ್ಥಾನದಲ್ಲಿ ಎರಡು ಶಾಸನಗಳೂ ಮತ್ತು ಸೋಮೇಶ್ವರದಲ್ಲಿ ಒಂದು ಶಾಸನವೂ ಇವೆ. ಹಳಗನ್ನಡದಲ್ಲಿರುವ ಆ ಶಾಸನಗಳಲ್ಲಿ ದೇವಸ್ಥಾನವನ್ನು ಕಟ್ಟಿಸಿದವರ ಮತ್ತು ದತ್ತಿಯ ವಿಷಯಗಳನ್ನು ತಿಳಿಸಿದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ